ಟೊಟೊ ಪುರಸ್ಕಾರ : ಕನ್ನಡ ಸೃಜನಶೀಲ ಸಾಹಿತ್ಯ 2011
(೨೫,೦೦೦ ರೂಪಾಯಿಗಳ ಒಂದು ಪುರಸ್ಕಾರ; ಈ ಬಾರಿ ಪುರಸ್ಕಾರಕ್ಕೆ ಬಂದ ಪ್ರವೇಶಗಳು ೧೨೬)
ನಮ್ಮ ಮೂವರು ತೀರ್ಪುಗಾರರು: ಕವಿ, ಕತೆಗಾರ ಮತ್ತು ಚಲನಚಿತ್ರ ಗೀತಕಾರ ಜಯಂತ ಕಾಯ್ಕಿಣಿ, ಕಥೆಗಾರ ಹಾಗೂ ಕೆಂಡಸಂಪಿಗೆ ಅಂತರ್ಜಾಲ ತಾಣದ ಸಂಪಾದಕ ಅಬ್ದುಲ್ ರಶೀದ್, ಕತೆಗಾರ ಮತ್ತು ‘ದೇಶ ಕಾಲ’ ಪತ್ರಿಕೆಯ ಸಂಪಾದಕ ವಿವೇಕ ಶಾನಭಾಗ.
ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಮೂರು ಪ್ರವೇಶಗಳು:
ಶ್ರೀದೇವಿ ಕಳಸದ (ಬೆಂಗಳೂರು)
ಮೌನೇಶ ಎಲ್ ಬಡಿಗೇರ್ (ಬೆಂಗಳೂರು)
ಸುಶ್ರುತ ದೊಡ್ಡೇರಿ (ಬೆಂಗಳೂರು)
ಪುರಸ್ಕಾರ ವಿಜೇತರು: ಮೌನೇಶ ಎಲ್. ಬಡಿಗೇರ್ (ಬೆಂಗಳೂರು)
ತೀರ್ಪುಗಾರರ ಟಿಪ್ಪಣಿಗಳು:
ಈ ವರ್ಷ ಪುರಸ್ಕಾರಕ್ಕಾಗಿ ಬಂದ ಪ್ರವೇಶಗಳಲ್ಲಿ ಉತ್ಸಾಹ ಮತ್ತು ವೈವಿಧ್ಯವಿದೆ. ಉತ್ಸಾಹದ ಜೊತೆಗೆ ತಾಳ್ಮೆಯೂ, ಚಿಂತನೆಯೂ ಸೇರಿದರೆ ಈ ಬರಹಗಾರರಿಂದ ಮಹತ್ವದ ಬರವಣಿಗೆಯನ್ನು ನಿರೀಕ್ಷಿಸಬಹುದು. ಕರ್ನಾಟಕದ ನಾನಾ ಭಾಗಗಳಿಂದ ಭಾಗವಹಿಸಿದ ಜನರಿಂದಾಗಿ ಈ ಪ್ರವೇಶಗಳಲ್ಲಿ ವಿಪುಲವಾದ ವಸ್ತುವೈವಿಧ್ಯವಿದೆ. ಜಾಗತೀಕರಣದಿಂದ ಬದಲಾಗುತ್ತಿರುವ ಜಗತ್ತಿನಲ್ಲಿ ತಮ್ಮ ಪ್ರಸ್ತುತತೆಯೇನು ಎಂಬುದರಿಂದ ಆರಂಭಿಸಿ ಸಮಾನತೆ, ಶಹರದ ಅನುಭವದ ದಿಗ್ಭ್ರಮೆ, ಹರೆಯದ ಪ್ರೀತಿಪ್ರೇಮಗಳ ತೀವ್ರತೆ - ಹೀಗೆ ಈ ಹೊಸಬರಹಗಾರರ ವಸ್ತುಗಳಲ್ಲಿ ವೈವಿಧ್ಯತೆಯಿದೆ. ಇದು ಬಹಳ ಸ್ವಾಗತಾರ್ಹ. ಆದರೆ ಕಲೆಗಾರಿಕೆಯ ದೃಷ್ಟಿಯಿಂದ ನೋಡಿದಾಗ ಬಹುತೇಕ ಪ್ರವೇಶಗಳು ಇನ್ನೂ ಉತ್ತಮವಾಗಿರಬಹುದಿತ್ತು ಅನಿಸಿತು. ಲೇಖಕ ಬರಹಗಳ ರಚನೆ, ಬಂಧ, ಭಾಷೆಗಳ ಜೊತೆ ಗುದ್ದಾಡಿದ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸಲಿಲ್ಲ. ತಮಗೆ ಸಾಧ್ಯವಿರುವುದನ್ನು ಚೆನ್ನಾಗಿ ಮಾಡುವಲ್ಲೇ ತೃಪ್ತಿ ಪಡೆದ ಹಾಗೆ ಬಹುತೇಕ ಪ್ರವೇಶಗಳು ಇದ್ದವು. ಭಾಷೆಯ ಜೊತೆಯ ನಿಕಟ ಸಂಬಂಧದಿಂದ ಹುಟ್ಟುವ ಕೃತಿಯಲ್ಲಿ ವಿಶೇಷ ಬಗೆಯ ಜೀವಂತಿಕೆ ಇರುತ್ತದೆ. ತಮ್ಮ ಈ ಸಹಜ ಲಯ ಯಾವುದು ಎಂದು ಸ್ವತಃ ಗುರುತಿಸಿಕೊಳ್ಳುವುದು ಹೊಸ ಲೇಖಕರಿಗೆ ಬಹಳ ಮುಖ್ಯವಾದುದು. ಇಲ್ಲಿ ಸ್ಪರ್ಧಿಸಿದ ಹಲವು ಲೇಖಕರಿಗೆ ಈ ಶಕ್ತಿ ಇದೆ. ಒಟ್ಟಾರೆಯಾಗಿ ನೋಡಿದಾಗ ಕನ್ನಡದ ಈ ಯುವ ಬರಹಗಾರರಲ್ಲಿ ಪ್ರತಿಭೆ ಮತ್ತು ಆಸಕ್ತಿಯ ಕೊರತೆಯಿಲ್ಲ ಅನ್ನುವುದು ಕಾಣುತ್ತದೆ. ಆದರೆ ಬರಹವನ್ನು ಗಂಭೀರವಾಗಿ ಪರಿಗಣಿಸಿ ಅಲ್ಲಿ ಸಾಧಿಸಬೇಕಾದ ನೈಪುಣ್ಯತೆಯ ಕೊರತೆ ಕಾಣುತ್ತದೆ. ಸತತವಾದ ಓದು ಮತ್ತು ಚಿಂತನಶೀಲತೆಯಿಂದ ಇದನ್ನು ಹರಿತಗೊಳಿಸಿಕೊಳ್ಳುವ ಅವಕಾಶವೂ ಅವರಿಗಿದೆ.
* * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * *
ಪ್ರಶಸ್ತಿ ಪ್ರದಾನ ಸಮಾರಂಭ
ಯುವ ಪ್ರತಿಭೆಗಳನ್ನು ಗುರುತಿಸಲು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಸ್ಥಾಪಿಸಿದ ಟೊಟೊ ಪುರಸ್ಕಾರದ ಏಳನೆಯ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ ೮, ೨೦೧೧ ರಂದು ಸಂಜೆ ೬:೩೦ ಗಂಟೆಗೆ, ಅಲಿಯೊಂಸ್ ಫ್ರಾಂಸೆಸ್, ತಿಮ್ಮಯ್ಯ ರಸ್ತೆ, ವಸಂತನಗರ, ಬೆಂಗಳೂರು (Alliance Francaise, Thimmaiah Road, Vasanth Nagar, Bangalore) ಇಲ್ಲಿ ನಡೆಯಲಿದೆ.
ಎಲ್ಲ ಮೂರು ವಿಭಾಗಗಳಲ್ಲಿ - ಛಾಯಾಚಿತ್ರ, ಸಂಗೀತ ಮತ್ತು ಸೃಜನಶೀಲ ಸಾಹಿತ್ಯ (ಇಂಗ್ಲಿಷ್ ಮತ್ತು ಕನ್ನಡ) - ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಈ ಸಮಾರಂಭದಲ್ಲಿ ಪ್ರಕಟಿಸಲಾಗುವುದು. ಎಲ್ಲ ಪ್ರಶಸ್ತಿಗಳ ವಿವರಗಳನ್ನು ಈ ಬ್ಲಾಗಿನಲ್ಲಿ ೧೧ ಜನವರಿ ೨೦೧೧ ರಂದು ಪ್ರಕಟಿಸಲಾಗುವುದು.
ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಯವಿಟ್ಟು ಬನ್ನಿ
* * * * * * * * * * * * * * * * * * * * * * * * * * * * * * * * * * * * * * * * * * * * * * * * * * * * * *
ಟೊಟೊ ಪುರಸ್ಕಾರ ೨೦೧೧
ಕನ್ನಡ ಸೃಜನಶೀಲ ಸಾಹಿತ್ಯ
ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ
ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಈವರೆಗೆ ಇಂಗ್ಲಿಷ್ ಲೇಖಕರಿಗೆ ಮಾತ್ರ ಸೀಮಿತವಾಗಿತ್ತು. ಈ ವರ್ಷದಿಂದ ಅದು ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ.
ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ ೨೦೧೧ ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ೧೮ ರಿಂದ ೨೯ ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ನೀವು ೧ ಜನವರಿ ೧೯೮೧ ರ ನಂತರ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಪ್ರವೇಶಗಳನ್ನು ಕಳಿಸಬಹುದು. ಈ ಎಲ್ಲ ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. ಪುರಸ್ಕೃತರು ೨೫೦೦೦ ರೂಪಾಯಿಗಳ ನಗದು ಬಹುಮಾನವನ್ನು ಪಡೆಯುವರು.
ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ ೨೦೧೦
ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಬಹುದು. ಈ ಪುರಸ್ಕಾರದ ಉದ್ದೇಶವೇ ಹೊಸ ಬರಹಗಾರರನ್ನು ಗುರುತಿಸುವುದಾಗಿರುವುದರಿಂದ ನೀವು ಈಗಾಗಲೇ ಪ್ರಸಿದ್ಧಿ ಪಡೆದಿರುವ ಲೇಖಕರಾದರೆ ಇದಕ್ಕೆ ಪ್ರವೇಶಗಳನ್ನು ಕಳಿಸಬೇಡಿ.
ಪ್ರತಿ ಪ್ರವೇಶವು ೭೫೦೦ ಶಬ್ದಗಳನ್ನು ಮೀರಬಾರದು. ಕವಿತೆಗಳನ್ನು ಕಳುಹಿಸುವವರು ೬ ರಿಂದ ೧೦ ಕವಿತೆಗಳನ್ನು ಕಳಿಸಬಹುದು. ಕಥೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು - ಆದರೆ ಎಲ್ಲ ಕತೆಗಳೂ ಸೇರಿ ೭೫೦೦ ಶಬ್ದಗಳನ್ನು ಮೀರಬಾರದು. ನೀವು ಎಲ್ಲ ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳುಹಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ಉದಾಹರಣೆಗೆ ನೀವು ಎಲ್ಲ ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆ, ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿಯೊಂದು ಪ್ರವೇಶದ ಮಿತಿ ೭೫೦೦ ಶಬ್ದಗಳು.
ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕಥೆ, ಕವಿತೆ, ನಾಟಕಗಳನ್ನು ಕಳುಹಿಸಬಹುದು.
ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕ, ಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಪ್ರಕಟನೆಯ ವಿವರಗಳನ್ನು ನಮೂದಿಸಿ, ಇದು ನಿಮ್ಮದೇ ಸ್ವಂತ ಸೃಜನಶೀಲ ಕೃತಿಯೆಂಬುದನ್ನು ದೃಢೀಕರಿಸಿದ ಲಿಖಿತ ಹೇಳಿಕೆಯನ್ನು ಲಗತ್ತಿಸಬೇಕು. ಜೊತೆಗೆ ನಿಮ್ಮ ಅಂಚೆಯ ವಿಳಾಸ, ಈಮೇಲ್ ವಿಳಾಸ, ಫೋನ್ ನಂಬರುಗಳು (ಚರ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳು) ಹಾಗೂ ನಿಮ್ಮ ಸ್ವವಿವರಗಳುಳ್ಳ ಚಿಕ್ಕ ಬಯೋಡಾಟಾ ಕೂಡ ಪ್ರತ್ಯೇಕ ಹಾಳೆಯ ಮೇಲೆ ಬರೆದು ಕಳಿಸಿ.
ನಿಮ್ಮ ಪ್ರವೇಶಗಳನ್ನು ಸಾದಾ ಅಂಚೆಯ ಮೂಲಕ ಅಥವಾ ಕುರಿಯರ್ ಮೂಲಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳಿಸಿ. ಹಸ್ತಪ್ರತಿಗಳನ್ನು ಹಾಳೆಯ ಒಂದೇ ಮಗ್ಗಲಿಗೆ ಕಂಪ್ಯೂಟರ್ ಬಳಸಿ ಅಥವಾ ಟೈಪ್ ಮಾಡಿ ಕಳಿಸಬೇಕು. ಹಸ್ತಪ್ರತಿಯಲ್ಲದೇ ನೀವು ಈಮೇಲ್ ಮೂಲಕ ಕೂಡ ಪ್ರವೇಶಗಳನ್ನು ಕಳಿಸಬಹುದು. ಕನ್ನಡ ಅಕ್ಷರಗಳಿಗೆ ಬರಹ/ನುಡಿ ಮಾತ್ರ ಬಳಸಿ. ಕೇವಲ ಈಮೇಲ್ ಮೂಲಕ ಮಾತ್ರ ಬಂದ ಪ್ರವೇಶಗಳನ್ನು ಪರಿಗಣಿಸಲಾಗುವುದಿಲ್ಲ. ಮುದ್ರಿತ ಪ್ರತಿ ಕಳಿಸುವುದು ಕಡ್ಡಾಯ. ಪುರಸ್ಕಾರದ ಕುರಿತು ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಪ್ರವೇಶಗಳನ್ನು ಈ ವಿಳಾಸಕ್ಕೆ ಕಳಿಸಿ:
Toto Funds the Arts (TFA)
H 301 Adarsh Gardens
8th Block, 47th Cross
Jayanagar
Bangalore 560 082
Phone 080 26990549
ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪುರಸ್ಕಾರವನ್ನು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಸೈಟಿನಲ್ಲಿ (http://totofundsthearts.blogspot.com) ಪ್ರಕಟಿಸಲಾಗುವುದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು. ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವಾ ಸಂಸ್ಥೆಯ ವೃತ್ತಪತ್ರದಲ್ಲಿ ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ.
ಟಿ.ಎಫ್.ಎ. ಸಂಸ್ಥೆಯು ಆಂಗಿರಸ ‘ಟೊಟೊ‘ ವೆಲ್ಲಾನಿಯ ಸ್ಮರಣಾರ್ಥ ೨೦೦೪ ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.