ಟೊಟೊ ಪುರಸ್ಕಾರ : ಕನ್ನಡ ಸೃಜನಶೀಲ ಸಾಹಿತ್ಯ ೨೦೧೨ - ಫಲಿತಾಂಶ
(೨೫,೦೦೦ ರೂಪಾಯಿಗಳ ಪುರಸ್ಕಾರ)
ನಮ್ಮ ಮೂವರು ತೀರ್ಪುಗಾರರು: ಕತೆಗಾರ, ಕಾದಂಬರಿಕಾರ ಮತ್ತು ವಿಮರ್ಶಕ ಕೆ. ಸತ್ಯನಾರಾಯಣ, ವಿಮರ್ಶಕಿ ಎಂ. ಎಸ್ ಆಶಾದೇವಿ ಹಾಗೂ ಕತೆಗಾರ, ಕಾದಂಬರಿಕಾರ ಮತ್ತು ‘ದೇಶ ಕಾಲ’ ಪತ್ರಿಕೆಯ ಸಂಪಾದಕ ವಿವೇಕ ಶಾನಭಾಗ.
ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಮೂರು ಪ್ರವೇಶಗಳು:
ಡಾ. ಕಣಾದ ರಾಘವ
ಕಾವ್ಯಾ ಪಿ ಕಡಮೆ (ಹುಬ್ಬಳ್ಳಿ)
ಸುಶ್ರುತ ದೊಡ್ಡೇರಿ (ಬೆಂಗಳೂರು)
ಪುರಸ್ಕಾರ ವಿಜೇತರು: ಕಾವ್ಯಾ ಪಿ ಕಡಮೆ (ಹುಬ್ಬಳ್ಳಿ
ತೀರ್ಪುಗಾರರ ಟಿಪ್ಪಣಿಗಳು
ಈ ವರ್ಷ ಪುರಸ್ಕಾರಕ್ಕಾಗಿ ಕರ್ನಾಟಕದ ಎಲ್ಲ ಭಾಗಗಳಿಂದ ಬಂದ ಪ್ರವೇಶಗಳಲ್ಲಿ ಬಹಳ ವಸ್ತು ವೈವಿಧ್ಯವಿದೆ ಮತ್ತು ಅಭಿವ್ಯಕ್ತಿಯಲ್ಲಿ ತೀವ್ರತೆಯಿದೆ. ಕನ್ನಡದಲ್ಲಿ ಕಥಾಪ್ರಕಾರವು ಹೆಚ್ಚು ಜೀವಂತವೂ ಪ್ರಯೋಗಾತ್ಮಕವೂ ಆಗಿದೆಯೆಂಬ ಸಾಮಾನ್ಯ ನಂಬಿಕೆಗೆ ವ್ಯತಿರಿಕ್ತವಾಗಿ ಈ ಬಾರಿಯ ಪ್ರವೇಶಗಳಲ್ಲಿ ಕವಿತೆ ಪ್ರಾಧಾನ್ಯ ಪಡೆದಿತ್ತು. ಕೊನೆಯ ಸುತ್ತಿನಲ್ಲಿ ಆಯ್ಕೆಯಾದ ಪ್ರವೇಶಗಳಲ್ಲಿಯೂ ಕಾವ್ಯ ಪ್ರಕಾರದ ಬರಹಗಳು ವಿಶೇಷವಾದ ಕಲಾಪ್ರತಿಭೆ ಹಾಗೂ ಪ್ರಬುದ್ಧತೆಯನ್ನು ತೋರಿಸಿದವು. ಇಲ್ಲಿ ಕವಿಗಳಿಗೆ ಸ್ಪಷ್ಟವಾದ ’ಸ್ವ’ ಇರುವುದು ಹಾಗೂ ಅದನ್ನು ಅವರು ಗುರುತಿಸಿಕೊಂಡಿರುವುದು ಎದ್ದು ತೋರಿತು.
ಯುವಜನತೆಯ ಬರಹಗಳನ್ನು ಓದುವ, ಚರ್ಚಿಸುವ ಈ ಅವಕಾಶವು ಅಪರೂಪದ್ದು. ಕನ್ನಡದ ಹೊಸ ಬರಹಗಳ ಒಂದು ಮುನ್ನೋಟ ಇಲ್ಲಿ ದೊರೆಯುತ್ತದೆ.
* * *
ಕಾವ್ಯಾ ಪಿ ಕಡಮೆ
ಭಾಷೆಯ ಬಗೆಗಿನ ಅನುರಕ್ತಿಯೇ ಅಪ್ಪಟ ಕಾವ್ಯದ ದಿಕ್ಸೂಚಿ. ಇಲ್ಲಿ ಭಾಷೆ ಎನ್ನುವುದು ಪಠ್ಯದ ಶರೀರವೂ ಹೌದು, ಶಾರೀರವೂ ಹೌದು.ವಸ್ತುವಿನ ಹೊಸತನ ಎನ್ನುವುದು ಬದಲಾದ ನೋಟ ಎನ್ನುವುದಾದರೆ ಅದು ಬದಲಾದ ಹೊಸ ಭಾಷೆ ಆಗುವುದೂ ಅನಿವಾರ್ಯ.
ಈ ಸಂಕಲನದ ಕವಿತೆಗಳು ನಮ್ಮ ಗಮನ ಸೆಳೆಯುವುದು ಈ ಕಾರಣಕ್ಕಾಗಿ; ವಿವರಗಳನ್ನು ಹೊಂದಿಸಿ ಹೆಣೆಯುವ ಕ್ರಮದಲ್ಲಿಯೆ ಕವನವೊಂದು ಅನುಭವದ ಅನಿರೀಕ್ಷಿತ ಮಜಲುಗಳನ್ನು ತೆರೆಯುತ್ತಾ, ಕಟ್ಟುತ್ತಾ ಹೋಗುವ ಇಲ್ಲಿನ ಕವನಗಳಲ್ಲಿ ‘ಶೋಧ’ವೇ ಮೂಲಸ್ಥಾಯಿಯಾಗಿರುವಂತೆ ತೋರುತ್ತದೆ. ಸಾಮಾನ್ಯವಾಗಿ ಮೊದಲ ಕವನಗಳಲ್ಲಿ ಕಾಣಿಸುವ ಎಲ್ಲವನ್ನೂ ಹಿಡಿದು ಬಿಡುವ ಆತುರ, ಹಿಡಿದು ಬಿಟ್ಟೆನೆನ್ನುವ ಭ್ರಮೆ, ತೀರ್ಮಾನದ ದುಡುಕು ಇಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಸಂಬಂಧಗಳ ಪಕಳೆಯಲ್ಲಿಯೇ ಬದುಕಿನ ಹೂವನ್ನು ಅರಳಿಸುವ ಹಂಬಲ, ಸಂಭ್ರಮ ಈ ಕವಿತೆಗಳಿಗೆ ಹರೆಯದ ಸಹಜ ಸೌಷ್ಟವವನ್ನು, ಚೆಲುವನ್ನೂ ಕೊಟ್ಟಿದೆ. ಇದು ಹುಸಿ ಭಾವುಕತೆಯಾಗಬಾರದೆನ್ನುವ ಎಚ್ಚರವು ಇಲ್ಲಿನ ಕವಿತೆಗಳಿಗೊಂದು ಗಾಂಭೀರ್ಯವನ್ನು ತಂದುಕೊಟ್ಟಿದೆ. ಈ ಕಾರಣಕ್ಕಾಗಿಯೇ ಈ ಸಂಕಲನ ಅಪ್ಪಟ ಕವಿಯ ಆಗಮನವನ್ನು ಸೂಚಿಸುತ್ತಿರುವಂತಿದೆ.
ಸುಶ್ರುತ ದೊಡ್ಡೇರಿ
ಒಂದಕ್ಕೊಂದು ಸಂಬಂಧವಿಲ್ಲದ ಚಿತ್ರಗಳನ್ನು ಜೋಡಿಸಿ ಮಾಡಿದ ಕೊಲಾಜ್‌ನಲ್ಲಿ ಅರ್ಥ ಹುಡುಕುವುದು ಹುಂಬತನವೇನೋ ಎಂಬ ದ್ವಂದ್ವದಲ್ಲಿ ಹೊಯ್ದಾಡುವ ಇಲ್ಲಿನ ಕವಿತೆಗಳು ಈ ದ್ವಂದ್ವವನ್ನೇ ಬದುಕಿನ ಕೇಂದ್ರ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ.ಬದುಕಿನ ಸಂಕೀರ್ಣತೆ ಹುಟ್ಟಿಸುವ ಅಧೀರತೆಯಿಂದ ಪಾರಾಗಲೋ ಎಂಬಂತೆ ಈ ಕವಿ, ಭಾಷೆಯಲ್ಲಿ ನಡೆಸುವ ಪ್ರಯೋಗಗಳು ಕುತೂಹಲಕಾರಿಯಾಗಿವೆ. ಈ ಕವಿತೆಗಳ ಇನ್ನೊಂದು ನೆಲೆಯೆಂದರೆ ಸಂಯಮವನ್ನು ಪ್ರಜ್ಞಾಪೂರ್ವಕವಾಗಿ ದಕ್ಕಿಸಿಕೊಳ್ಳಲು ನಡೆಸುವ ಪ್ರಯತ್ನ. ‘ರಾಯರು ಮತ್ತು ಪದುಮ’ ನಿಸ್ಸಂಶಯವಾಗಿ ಇತ್ತೀಚಿನ ಯಶಸ್ವೀ ಕವಿತೆಗಳಲ್ಲೊಂದು.
ಡಾ. ಕಣಾದ ರಾಘವ
ವಿವರಗಳು ಗದ್ಯದ ಸಹಜ ಆವರಣ ಮತ್ತು ಹಕ್ಕಾಗಿರುವಂತೆಯೇ ಅವುಗಳಿಗೆ ಕಾವ್ಯದ ನವಿರು, ಸೂಕ್ಷ್ಮ, ಇರಬೇಕಾಗಿರುವುದು ಅಷ್ಟೇ ಮೂಲಭೂತವಾದ ಕರಾರು. ಪರಿಸರ ಮತ್ತು ವ್ಯಕ್ತಿತ್ವದ ಅಭಿನ್ನತೆಯನ್ನು ಮನದಟ್ಟು ಮಾಡಿಕೊಳ್ಳಲೋ ಎಂಬಂತೆ ಈ ಎರಡನ್ನೂ ಸಮೀಕರಿಸುವುದರಲ್ಲಿ ಇಲ್ಲಿನ ಕವಿತೆಗಳಿಗೆ ಅಪಾರ ಆಸಕ್ತಿ ಇದೆ. ಈ ಎರಡರಲ್ಲಿ ಯಾವುದು ನಿರ್ಣಾಯಕ ಎಂಬ ಗೋಜಿಗೆ ಹೋಗದೆ ಈ ಎರಡರಿಂದ ಸೃಷ್ಟಿಯಾಗುವ ಬದುಕಿನ ಲಯ-ಗತಿಯನ್ನು ಹಿಡಿಯಲು ಈ ಕಥೆಗಳು ಹೊರಡುತ್ತವೆ. ಮನುಷ್ಯನ ಅಸಹಾಯಕತೆಯ ಮೂಲ ಅಪರಿಹಾರ್ಯ ಅನಿವಾರ್ಯತೆಯಲ್ಲಿದೆಯೋ? ಸ್ವ ಆರೋಪಿತ ಅಸಹಾಯಕತೆಯಲ್ಲಿದೆಯೋ ಎನ್ನುವ ಪ್ರಶ್ನೆಗಳು ಈ ಕತೆಗಳಲ್ಲಿ ಪುನರುಕ್ತವಾಗುತ್ತವೆ. ಈ ಪ್ರಶ್ನೆಗಳ ತೀವ್ರತೆ ಮತ್ತು ಆರ್ತತೆಯೇ ಈ ಕತೆಗಳ ಶಕ್ತಿ ಮತ್ತು ಸೌಂದರ್ಯ.
ಟೊಟೊ ಪುರಸ್ಕಾರ ೨೦೧೨ - ಕನ್ನಡ ಸೃಜನಶೀಲ ಸಾಹಿತ್ಯ
ಟೊಟೊ ಪುರಸ್ಕಾರ ೨೦೧೨
ಕನ್ನಡ ಸೃಜನಶೀಲ ಸಾಹಿತ್ಯ
ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ
ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ವರ್ಷದಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ.
ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ ೨೦೧೨ ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ರಾಬರ‍್ಟ್ ಬಾಶ್ ಎಂಜಿನಿಯರಿಂಗ್ ಸಂಸ್ಥೆಯ ಸಹಯೋಗದೊಡನೆ ಪ್ರವೇಶಗಳನ್ನು ಆಹ್ವಾನಿಸುತ್ತಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ೧೮ ರಿಂದ ೨೯ ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ನೀವು ೧ ಜನವರಿ ೧೯೮೨ ರ ನಂತರ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಪ್ರವೇಶಗಳನ್ನು ಕಳಿಸಬಹುದು. ಈ ಎಲ್ಲ ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. ಪುರಸ್ಕೃತರು ೨೫೦೦೦ ರೂಪಾಯಿಗಳ ನಗದು ಬಹುಮಾನವನ್ನು ಪಡೆಯುವರು.
ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: ೧೫ ಅಕ್ಟೋಬರ್ ೨೦೧೧
ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಬಹುದು. ಈ ಪುರಸ್ಕಾರದ ಉದ್ದೇಶವೇ ಹೊಸ ಬರಹಗಾರರನ್ನು ಗುರುತಿಸುವುದಾಗಿರುವುದರಿಂದ ನೀವು ಈಗಾಗಲೇ ಪ್ರಸಿದ್ಧಿ ಪಡೆದಿರುವ ಲೇಖಕರಾದರೆ ಇದಕ್ಕೆ ಪ್ರವೇಶಗಳನ್ನು ಕಳಿಸಬೇಡಿ.
ಪ್ರತಿ ಪ್ರವೇಶವು ೭೫೦೦ ಶಬ್ದಗಳನ್ನು ಮೀರಬಾರದು. ಕವಿತೆಗಳನ್ನು ಕಳುಹಿಸುವವರು ೬ ರಿಂದ ೧೦ ಕವಿತೆಗಳನ್ನು ಕಳಿಸಬಹುದು. ಕಥೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು - ಆದರೆ ಎಲ್ಲ ಕತೆಗಳೂ ಸೇರಿ ೭೫೦೦ ಶಬ್ದಗಳನ್ನು ಮೀರಬಾರದು. ನೀವು ಎಲ್ಲ ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳುಹಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ಉದಾಹರಣೆಗೆ ನೀವು ಎಲ್ಲ ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆ, ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿಯೊಂದು ಪ್ರವೇಶದ ಮಿತಿ ೭೫೦೦ ಶಬ್ದಗಳು.
ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕಥೆ, ಕವಿತೆ, ನಾಟಕಗಳನ್ನು ಕಳುಹಿಸಬಹುದು.
ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ನಿಮ್ಮ ಹುಟ್ಟಿದ ದಿನಾಂಕ, ಕೃತಿಯು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಪ್ರಕಟನೆಯ ವಿವರಗಳನ್ನು ನಮೂದಿಸಿ, ಇದು ನಿಮ್ಮದೇ ಸ್ವಂತ ಸೃಜನಶೀಲ ಕೃತಿಯೆಂಬುದನ್ನು ದೃಢೀಕರಿಸಿದ ಲಿಖಿತ ಹೇಳಿಕೆಯನ್ನು ಲಗತ್ತಿಸಬೇಕು. ಜೊತೆಗೆ ನಿಮ್ಮ ಅಂಚೆಯ ವಿಳಾಸ, ಈಮೇಲ್ ವಿಳಾಸ, ಫೋನ್ ನಂಬರುಗಳು (ಚರ ಮತ್ತು ಸ್ಥಿರ ದೂರವಾಣಿ ಸಂಖ್ಯೆಗಳು) ಹಾಗೂ ನಿಮ್ಮ ಸ್ವವಿವರಗಳುಳ್ಳ ಚಿಕ್ಕ ಬಯೋಡಾಟಾ ಕೂಡ ಪ್ರತ್ಯೇಕ ಹಾಳೆಯ ಮೇಲೆ ಬರೆದು ಕಳಿಸಿ.
ನಿಮ್ಮ ಪ್ರವೇಶಗಳನ್ನು ಸಾದಾ ಅಂಚೆಯ ಮೂಲಕ ಅಥವಾ ಕುರಿಯರ್ ಮೂಲಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳಿಸಿ. ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸಬೇಡಿ. ಹಸ್ತಪ್ರತಿಗಳನ್ನು ಹಾಳೆಯ ಒಂದೇ ಮಗ್ಗಲಿಗೆ ಕಂಪ್ಯೂಟರ್ ಬಳಸಿ ಅಥವಾ ಟೈಪ್ ಮಾಡಿ ಕಳಿಸಬೇಕು. ಹಸ್ತಪ್ರತಿಯಲ್ಲದೇ ನೀವು ಈಮೇಲ್ ಮೂಲಕ ಕೂಡ ಪ್ರವೇಶಗಳನ್ನು ಕಳಿಸಬಹುದು. ಕನ್ನಡ ಅಕ್ಷರಗಳಿಗೆ ಬರಹ/ನುಡಿ ಮಾತ್ರ ಬಳಸಿ. ಕೇವಲ ಈಮೇಲ್ ಮೂಲಕ ಮಾತ್ರ ಬಂದ ಪ್ರವೇಶಗಳನ್ನು ಪರಿಗಣಿಸಲಾಗುವುದಿಲ್ಲ. ಮುದ್ರಿತ ಪ್ರತಿ ಕಳಿಸುವುದು ಕಡ್ಡಾಯ. ಪುರಸ್ಕಾರದ ಕುರಿತು ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಪ್ರವೇಶಗಳನ್ನು ಈ ವಿಳಾಸಕ್ಕೆ ಕಳಿಸಿ:
Toto Funds the Arts (TFA)
H 301, Adarsh Gardens, 8th Block, 47th Cross,
Jayanagar, Bangalore 560 082
ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಪುರಸ್ಕಾರವನ್ನು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟಿನಲ್ಲಿ (http://totofundsthearts.blogspot.com) ಪ್ರಕಟಿಸಲಾಗುವುದು. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು. ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವಾ ಸಂಸ್ಥೆಯ ವೃತ್ತಪತ್ರದಲ್ಲಿ ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ.
ಟಿ.ಎಫ್.ಎ. ಸಂಸ್ಥೆಯು ಆಂಗಿರಸ ‘ಟೊಟೊ‘ ವೆಲ್ಲಾನಿಯ ಸ್ಮರಣಾರ್ಥ ೨೦೦೪ ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.
0 comments:
Post a Comment